Friday, August 4, 2017

ಕಾಡಿನ ಬೆಂಕಿ - ಡಿಸೋಜ ನಾ

Kadina Benki - Dsouza Na

 



ಈ ಕಾದಂಬರಿಯ ಹಿಂದೆ ಒಂದು ಕತೆ ಇದೆ. ೧೯೮೪ರ ಸುಮಾರಿಗೆ ಶಿವಮೊಗ್ಗೆಯ ಶ್ರೀಯುತ ಅಶೋಕ ಪೈಗಳು ಒಂದು ಕತೆಯನ್ನು ಹೇಳಿದರು. ಮನುಷ್ಯನ ಬದುಕಿನ ಪ್ರಮುಖ ಆಕರ್ಷಣೆಯಾದ ಲೈಂಗಿಕ ವಿಷಯಕ್ಕೆ ಸಂಬಂಧಪಟ್ಟ ಕತೆ ಅದು. ಈ ಕತೆಯನ್ನು ಅವರು ಹೇಳುವಾಗ ಅಲ್ಲಿ ನನ್ನ ಸ್ನೇಹಿತರಾದ ಸಂತೋಷಕುಮಾರ ಗುಲ್ವಾಡಿ ಈ ಕತೆಯನ್ನು ಒಂದು ಕಾದಂಬರಿಯನ್ನಾಗಿ ಬರೆಯಲು ಹೇಳಿದರು. ಅಲ್ಲದೆ ಈ ಕಾದಂಬರಿಯನ್ನು ಅವರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಿಸುವ ಭರವಸೆಯನ್ನೂ ನೀಡಿದರು.

ಕತೆ ನನ್ನ ಹಿಂಡಿ ಹಾಕಿದ್ದರಿಂದ ನಾನು ಆ ಕೂಡಲೇ ಒಂದು ಕಾದಂಬರಿಯನ್ನು ಬರೆದೆ, ಅಂತೆಯೇ ಈ ಕಾದಂಬರಿ 'ತರಂಗ' ವಾರಪತ್ರಿಕೆಯಲ್ಲಿ ಧಾರವಾಯಿಯಾಗಿ ಪ್ರಕಟಾಯಿತು ಕೂಡ.

ನಮ್ಮ ಜನ ಎಲ್ಲ ವಿಷಯಗಳಲ್ಲೂ ತೆರೆದ ಮನಸ್ಸಿನವರಾದರು ಲೈಂಗಿಕ ವಿಷಯಕ್ಕೆ ಬಂದರೆ ಏನೋ ಮಡಿವಂತಿಕೆ, ನಾಚಿಕೆ, ಮುಜುಗರವನ್ನು ವ್ಯಕ್ತಪಡಿಸುವುದನ್ನು ನಾವು ಗಮನಿಸುತ್ತ ಬಂದಿದ್ದೇನೆ. ಲೈಂಗಿಕ ವಿಷಯಗಳ ಬಗ್ಗೆ ಮಾತನಾಡುವುದಾಗಲಿ, ಚರ್ಚೆ ಮಾಡುವುದಾಗಲಿ. ವೈದ್ಯರಲ್ಲಿ ಸಮಾಲೋಚನೆ ಮಾಡುವುದಾಗಲಿ ಒಂದು ಅಪರಾಧ ಅನ್ನುವ ಮನೋಭಾವ ನಮ್ಮ ಜನರಲ್ಲಿದೆ. ಇಂದರಿಂದಾಗಿ ನಾವು ಎಂತಹಾ ದುರಂತವನ್ನು ಎದುರುರಿಸುತ್ತಿದ್ದೇವೆ ಎಂದರೆ, ಹಲವು ಲೈಂಗಿಕ ಸಮಸ್ಯೆಗಳ ತುಡಿತಕ್ಕೆ ಒಳಗಾದ ನಮ್ಮ ಜನರ ಬದುಕನ್ನು ಇವು ಆಂತರಿಕವಾಗಿ ಕಾಡುತ್ತಿವೆ, ಒಳಗೊಳಗೇ ಘಾಸಿಪಡಿಸುತ್ತಿದೆ. ಅದರಲ್ಲೂ ನಮ್ಮ ಹೆಣ್ಣುಮಕ್ಕಳ ಬವಣೆ ಹೇಳುವಂತಹುದಲ್ಲ. ಈ ಕಾದಂಬರಿಯಲ್ಲಿ ನಾನು ಎತ್ತಿಕೊಂಡಿರಿರುವ ವಿಷಯ ಕೂಡ ಇದೇನೆ. 

ಕಾದಂಬರಿ ಪತ್ರಿಕೆಯಲ್ಲಿ ಬರುತ್ತಿದ್ದಂತೆಯೇ ಓದುಗರಲ್ಲಿ ಕೆಲವರು ಈ ಕತೆಯನ್ನು ಜೀರಿಣಿಸಿಕೊಳ್ಳಲಾರದೆ ನಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದರಾದರೆ, ಹಲವರು ಈ ಕತೆಯನ್ನು ಮೆಚ್ಚಿಕೊಂಡರು. ಮನಃಶಾಸ್ತ್ರಕ್ಕೆ ಸಂಬಂಧಪಟ್ಟ ಈ ವಸ್ತು ಗಮನವನ್ನು ಸೆಳೆಯಿತು.

೧೯೮೪ ರಲ್ಲಿ ಬೆಂಗಳೂರಿನ ಪ್ರದೀಪ ಪ್ರಕಾಶವನದ ನನ್ನ ಮಿತ್ರರು ಇದನ್ನು ಪುಸ್ತಕ ರೂಪದಲ್ಲಿ ಹೊರತಂದ ಮೇಲೆ 'ಕಾಡಿನ ಬೆಂಕಿ' ಚಲನಚಿತ್ರ ನಿರ್ಮಾಪಕರ ಗಮನಕ್ಕೆ ಸೆಳೆಯಿತು. ಶ್ರೀ ಸುರೇಶ ಹೆಬ್ಳಿಕರ್ ಅವರು ಇದನ್ನು ಒಂದು ಚಿತ್ರವಾಗಿಸುವ ಯತ್ನಕ್ಕೆ ಕೈ ಹಾಕಿದರು. ಹೀಗೆ ಈ ಕಾದಂಬರಿಯನ್ನು ತೆರೆಗೆ ತರುವ ಮಾತನ್ನು ಇತರೇ ಹಲವರು ಮಾಡಿದ್ದರೂ ನಾನು ಅನುಮತಿ ನೀಡಿರಲಿಲ್ಲ. ಆದರೆ ಸುರೇಶ ಹೆಬ್ಳಿಕರ್ ಅವರಿಗೆ ನಾನು ಅನುಮತಿ ಕೊಡುವುದರ ಜೊತೆಗೆ ಅಶೋಕ ಪೈಗಳ ತಮ್ಮ ಬ್ಯಾನರಿನ ಅಡಿಯಲ್ಲಿ ಇದನ್ನು ತೆರೆಗೆ ಮುಂದೆ ಬಂದರು. 

ಚಲನಚಿತ್ರದ ಬಗ್ಗೆ ಸಂವಾದಕ್ಕೆ ನಾವು ಮಿತ್ರರು ಒಟ್ಟಿಗೆ ಕುಳಿತಾಗ ಕಾದಂಬರಿಯ ಅಂತ್ಯವನು ಬದಲಾಯಿಸುವ ಮಾತು ಬಂದಿತು. ಕಾದಂಬರಿಯನ್ನ ಓರ್ವ ಓದುಗ ಏಕಾಂತದಲ್ಲಿ  ಕುಳಿತು ಓದುತ್ತಾನೆ, ಆದರೆ ಚಲಚಿತ್ರವನ್ನು ಸಾವಿರಾರು ಜನ ನೋಡುತ್ತಾರೆ. ಕಾದಂಬರಿಯಲ್ಲಿ ಚರ್ಚಿತವಾಗಿರುವ ಸಮಸ್ಯೆಗೆ ಪರಿವಾರವಿಲ್ಲ ಅನ್ನುವ ನಂಬಿಕ ಜನರಲ್ಲಿ ಬರಬಾರದು, ಕಾರಣ ನಾನು ಕಥೆಯಲ್ಲಿ ನಾಯಕಿಯನ್ನು ಕೊಂದಿದ್ದೇನೆ, ಚಲಚಿತ್ರದಲ್ಲಿ ಇವನ್ನು ಉಳಿಸಿ ಎಂದು ನನ್ನ ಅನುಮತಿಯನ್ನು ನೀಡಿದೆ, ಅಂತೆಯೇ ಕಾದಂಬರಿಯ ಅಂತ್ಯ ಚಲಚಿತ್ರದಲ್ಲಿ ಬೇರೆಯೇ ಆಯಿತು.

ಎಲ್ಲೆಲ್ಲಿಯೋ ಲೊಕೇಶನ್ ಹುಡುಕಿ ಕೊನೆಗೆ ಸಾಗರಕ್ಕೆ  ಬಂಡ ನಿರ್ದೇಶಕರಿಗೆ ನಾನು ಜೋಗದ ವಿಷಯ ಹೇಳಿದಾಗ, ಜಾಗದಲ್ಲಿಯೇ ಈ ಚಿತ್ರದ ಚಿತ್ರೀಕರಣ ನೆಡೆಯಿತು.

ಚಲನಚಿತ್ರ ಬಿಡುಗಡೆಯಾದಾಗ ಎಲ್ಲ ಪ್ರೇಕ್ಷಕರು ಇದನ್ನು ಮೆಚ್ಚಿಕೊಂಡರು. ತುಂಬಿದ ಗೃಹದಲ್ಲಿ ಈ ಚಿತ್ರ ಪ್ರದರ್ಶನ ಕಾರಿತು. ನಿರ್ದೇಶಕರಿಗೆ, ನಿರ್ಮಾಪಕರಿಗೆ ಹೆಸರನ್ನು ತಂದು ಕೊಟ್ಟಿದ್ದಲ್ಲದೆ, ಚಿತ್ರ ರಜತಕಮಲವನ್ನು, ರಾಜ್ಯ ಪ್ರಶಸ್ತಿಯನ್ನು ಪಡೆಯಿತು.

೧೯೮೭ರಲ್ಲಿ ಕಾದಂಬರಿಯ ಎರಡನೆಯ ಮುದ್ರಣ ಹೊರಬಿದ್ದಿತು.

ಇದೀಗ ರವೀಂದ್ರ ಪ್ರಕಾಶನ ನನ್ನ ಗೆಳೆಯರಾದ ಶಿ ವೈ ಎ ದಂತಿಯವರು ಇದರ ಮೂರನೇ ಮುದ್ರಣವನ್ನು ಹೊರ ತರುತ್ತಿದ್ದಾರೆ. ಕಾದಂಬರಿಗೆ ಬೇಡಿಕೆ ಇದ್ದರು ಯಾವ ಪ್ರಕಾಶಕರ ಕಣ್ಣಿಗೂ ಇದು ಬಿದ್ದಿರಲಿಲ್ಲ. ದಾಂತಿಯವರೇ ಈ ಕಾದಂಬರಿಯ ನೆನಪನ್ನು ಮಾಡಿಕೊಂಡು ಇದನ್ನು ಹೊರ ತರುತ್ತಿದ್ದಾರೆ.

ಶ್ರೀ ದಾಂತಿಯವರಿಗೆ ಸುಂದರ ಮುಖಚಿತ್ರವನ್ನು ರಚಿಸಿದ ಶ್ರೀ ಚಂದ್ರನಾಥ ಆಚಾರ್ಯ ಅವರಿಗೆ, ಸುಂದರವಾಗಿ ಮುದ್ರಿಸುದ ಲಕ್ಷ್ಮಿ ಮುದ್ರಣಾಲಯ ಅವರುಗೆ ನಾನು ಕೃತಜ್ಞ.


ಕುಂಜಾಲು ಕಣಿವೆಯ ಕೆಂಪು - ಡಿಸೋಜ ನಾ

Kunjalu Kaniveya Kempu Hoovu  - Dsouza Na


ಮುನ್ನುಡಿಯಿಂದ:

೧೯೮೭ರಲ್ಲಿ ಈ ಕೃತಿ ಪ್ರಕಟವಾದಾಗ ನಾವು ಪರಿಸರದ ಬಗ್ಗೆ ಒಂದು ಬಗೆಯ ಅವ್ಗಜ್ಞೆಯನ್ನು ಬೆಳೆಸಿಕೊಂಡಿದ್ದೆವು. ಇಂದು ಈ ತಿರಸ್ಕಾರ ಮತ್ತೊ ಹೆಚ್ಚಾಗಿದೆ. ಇಂದು ಗಣಿಗಾರಿಕೆ, ನಗರ ನಿರ್ಮಾಣ, ಅಣೆಕಟ್ಟುಗಳ ನಿರ್ಮಾಣ, ರಸ್ತೆಗಳ ನಿರ್ಮಾಣ, ವ್ಯವಸಾಯ, ವಿದ್ಯುತ್ ಮಾರ್ಗಗಳು, ಕಾರ್ಖಾನೆಗಳು ಎಂದೆಲ್ಲ ಪರಿಸರದ ಮೇಲೆ ಅವ್ಯಾಹತವಾದ ದಬ್ಬಾಳಿಕೆ ನೆಡೆಯುತ್ತಿದೆ. ನಿರಂತರವಾದ ಈ ಪರಿಸರ ನಾಶ ನಮ್ಮ ಪಾಲಿಗೆ ಪರಿಸರ ಶಾಪವಾಗಿ ಪರಿಣಮಿಸಿದೆ. ನಾವು ಉಳಿಸಿಕೊಂಡುದಕ್ಕಿಂತ ಕಳೆದುಕೊಂಡಿರುವುದೇ ಅಧಿಕವಾಗಿದೆ.

ತಂದೆಯಾದವನು ಕಂಡ ಬದುಕನ್ನು ಮಗ ನೋಡಲು ಹೊರಟಾಗ ಅವನಿಗೆ ನಿರಾಸೆಯಾಗುತ್ತದೆ. ತನ್ನ ಸುತ್ತ ಒಂದು ವಿಷಾದದ ಛಾಯೆಯೇ ಕವಿದಿರುವದನ್ನೇ ಆತ ಕಾಣುತ್ತಾನೆ. ನಮ್ಮೆಲ್ಲರ ಕಥೆಯು ಇದೇ ಆಗಿದೆ ಅನ್ನುವುದು ಈ ಕಾದಂಬರಿಯ ಆಶಯ ಕೂಡ. 'ತರಂಗ' ಪತ್ರಿಕೆಯ ವಿಶೇಷಾಂಕದಲ್ಲಿ ಈ ಕಾದಂಬರಿ ಪ್ರಕಟವಾದಾಗ ಓದಿ ಮೆಚ್ಚಿಕೊಂಡವರು ಇಂದಿಗೂ ಇದನ್ನ ಮರೆತಿಲ್ಲ, ಆದರೆ ನಾವು ನಮ್ಮ ಪರಿಸರವನ್ನು ಮಾತ್ರ ಉಳಿಸಿಕೊಂಡು ಬಂದಿಲ್ಲ ಅನ್ನುವುದೇ ಒಂದು ದುರಂತವೇ ಸರಿ ಅನಿಸತ್ತದೆ ನನಗೆ.
 





Sunday, June 11, 2017

ನಾವಲ್ಲ : ಕಥಾಸಂಕಲನ

Navalla - Sethuram

 



ಮುನ್ನುಡಿಯಿಂದ

ಎಚ್. ಎಸ್. ವೆಂಕಟೇಶಮೂರ್ತಿ :

ರಂಗಭೂಮಿಯಲ್ಲಿ ನಾಟಕ ಕರ್ತೃ, ನಟ, ನಿರ್ದೇಶಕರಾಗಿ ಹೆಸರು ಮಾಡಿರುವ ಗೆಳೆಯ ಸೇತೂರಾಮ್, ಈಗ ತಮ್ಮ ಆರು ಕಥೆಗಳ ಸಂಕಲನ ಹೊರತರುತ್ತಿದ್ದಾರೆ. ನಿಷಿತವಾದ ಕತ್ತಿಯಲುಗಿನಂಥ ಭಾಷೆಯೇ ಅವರ ಅಪೂರ್ವ ಶಕ್ತಿ. ಬದುಕಿನ ಆಳ ಅಗಲಗಳನ್ನು ಅನುಭವಗತ ಮಾಡಿಕೊಂಡಿರುವ ಈ ಸೂಷ್ಕ್ಮ ಸಂವೇದಿ. ಜೀವನ ಮತ್ತು ಅದರ ಕಠೋರ ಮುಖವನ್ನು ನಿರ್ಮಮವಾಗಿ ತಮ್ಮ ಕಥೆಗಳಲ್ಲಿ ಪದರಪದರವಾಗಿ ಸೀಳಿ ಇಡುವರಾದರೂ ಆಳದಲ್ಲಿ ಗಾಢವಾಗಿ ಜೀವನಪ್ರೀತಿಯುಳ್ಳವರು. ಅವರ ಕಥೆಗಳ ತಿಕ್ಕಾಟ ಹುಟ್ಟುವುದೇ ಈ ಘರ್ಷಣದಲ್ಲಿ, ಭಾರತದ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಬದುಕು ಹದಗೆಟ್ಟಿದೆ ಎಂಬ ಅರಿವಿದ್ದೂ. ಈ ಕಥೆಗಳಲ್ಲಿ, ಕಾತ್ಯಾಯನಿಯಂಥ, ಮಂದಾಕಿನಿಯಂಥ  ಹೆಣ್ಣುಮಕ್ಕಳು ತಮ್ಮ ಅಭಿಮಾನ ಮತ್ತು ಸ್ತ್ರೀತ್ವದ ಧಾರಣಶಕ್ತಿಯನ್ನು ಕೊನೆಯವರೆಗೂ ಹೋರಾಡುತ್ತಲೇ ರಕ್ಷಿಸಿಕೊಳ್ಳುತ್ತಾರೆ. ಸೇತೂರಾಮ್ ಸೃಷ್ಠಿಸಿರುವ ಇಂಥ ಸ್ತ್ರೀಪಾತ್ರಗಳು ಹೆಣ್ಣಿನ ಬಗ್ಗೆ ಅವರಿಗೆ ಸಹಜವಾಗಿಯೇ ಇರುವ ಗೌರವಾದರಗಳನ್ನು ಪರೋಕ್ಷವಾಗಿ ಸೂಚಿಸುತ್ತದೆ. ಆ ನೆಲೆಯಲ್ಲಿ 'ಕಾತ್ಯಾಯನಿ' ಮತ್ತು 'ಮೌನಿ'(ಮಂದಾಕಿನಿಯ ಕತೆ) ಸಂಗ್ರಹದ ಅಗ್ರಗಣ್ಯ ಕಥೆಗಳಾಗಿವೆ. 

ಹಾಗೆ ನೋಡಿದರೆ 'ಮೌನಿ' ಒಂದು ಆಶಯದ ಕಥೆ. ಹೆಣ್ಣು, ಬದುಕಿನಲ್ಲಿ ಒಮ್ಮೆ ಹೀಗೆ ಮಂದಾಕಿನಿಯಂತೆ ಸ್ಪೋಟಿಸಿ, ತನ್ನನ್ನು ಪುರುಷ ಜಗತ್ತಿನೆದುರು ಸ್ಥಾಪಿಸಿಕೊಳ್ಳಬೇಕೆಂಬುದೇ ಪ್ರಬಲವೂ ಧನಾತ್ಮಕವೂ ಆದ ಆ ಸಾತ್ವಿಕ ರೋಷದ ಆಶಯ. ಆ ಆಶಯವನ್ನು ಹಿಡಿಯಲಿಕ್ಕಾಗಿಯೇ ಒಡ್ಡಿದ ಭಾಷೆಯ ಬಲೆಯ ಹಾಗಿದೆ ಈ ಕಥೆ. ಕಥೆಯ ಕೊನೆಯಲ್ಲಿ ಬರುವ ಮಂದಾಕಿನಿಯ, ಮೌನ ಮುರಿದ ಕಿಡಿನುಡಿಯ ಆಸ್ಪೋಟವನ್ನು ಕೇಳಿ; 'ರಾಜಕುಮಾರ.... ತಲೆ ಎತ್ತಿ ನೋಡೋ. ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡೋ.... ಪ್ರೀತಿಸ್ತೀನಿ... ಅಗಾಧವಾಗಿ ಪ್ರೀತಿಸ್ತೀನಿ...ಹೆಣ್ಣು... ನಾನು... ಪ್ರಕೃತಿ.... ಪ್ರೀತಿಸ್ತೀನಿ. ಜೀವಂತವಾಗಿರೋದನ್ನೆಲ್ಲಾ ಪ್ರೀತಿಸ್ತೀನಿ...ಸತ್ರೆ ಏನು ಮಾಡ್ಲಿ ಹೇಳೋ... ? ಕರಗಿಸಿ ಮಣ್ಣು ಮಾಡಿ ನನ್ನದೇ ಭಾಗ ಮಾಡ್ಕೋತೀನಿ... ಕೋಣೆಯಿಂದ ಹೊರಗೆ ಹೋಗ್ತಾ ಮುಖದಲ್ಲಿ ನಗು ಇರಲಿ ಸರದಾರ.... ಇಲ್ಲಿ ಹೇಳ ಬಿದ್ದಿಲ್ಲ ಇದೇನು ಸೂತಕದ ಕೋಣೆ ಅಲ್ಲ'

"ವಿದ್ಯೆಯ ಸರಸ್ವತಿಗೆ ಮಕ್ಳಳಿಲ್ಲ, ಸುಖದ ಲಕ್ಷ್ಮಿಗೆ ಮಕ್ಳಳಿಲ್ಲ, ಹಸಿವು ನೀಗುವ ಅನ್ನಪೂರ್ಣೇಶವರಿಗೆ ಮಕ್ಳಿಳಿಲ್ಲ. ಕಾಯೋ ದೇವಿ ದುರ್ಗೇನೂ ಬಂಜೇನೇ. ಹೇರೋರು ತಾಯಿ ಆದ್ರೂ, ಹೆರದೋರು ದೇವರಾದ್ರು ತಾಯಿಯಾಗ್ಲಿಲ್ಲ ಬಿಡು, ದೇವಿ ಆಗ್ತೀನಿ...." ಈ ಮಾತುಗಳಲ್ಲಿ ಹೆಣ್ಣಿನ ಆಕ್ರೋಷ ನಿಧಾನಕ್ಕೆ ತನ್ನದಾಗಿ ಮಾಡಿಕೊಳ್ಳುವ ಹೊಸ ಸಾಧ್ಯತೆಯ ಧ್ವನಿಶಕ್ತಿ ಬೆರಗು ಮೂಡಿಸುವಂತದು.

'ಕಾತ್ಯಾಯನಿ', ಮೌನಿಗಿಂತ ಘನವಾದ ಕಥೆ. ಭಾವನೆಗಳಲ್ಲಿ ಅದ್ದಿದ ಮನಸ್ಸು. ಆದರೆ ಬದುಕಿನ ಕಠೋರತೆಗೆ ತೆರೆದುಕೊಂಡ ಅಸ್ತಿತ್ವ. ಈ ಘರ್ಷಣೆಯೇ ಕಾತ್ಯಾಯನಿಯ ಕಥೆ. ಅವಳ ಬದುಕಿನ ಛಲ ಭಾವುಕತೆಯನ್ನು ಅದುಮಿಕೊಂಡು, ಜೀವನದ ಕರಾಳ ಮುಖವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವ ಅಂತಸ್ಥಿಯಿಂದ ಉಂಟಾದದ್ದು. ಹೆಣ್ಣಿನ ವ್ಯಕ್ತಿತ್ವದ ಅನಂತ ಮುಖಗಳು ಇಲ್ಲಿ ಪದರಪದರವಾಗಿ ಸೀಳಿಕೊಳ್ಳುತ್ತವೆ. ಹಾಗೆ ಸೀಳಿಕೊಳ್ಳಲಿಕ್ಕೆ ಭಾಷೆ ಒಂದು ಹರಿತವಾದ ಅಲಗುಕತ್ತಿಯಾಗಿ  ಲೇಖಕರಿಗೆ ಒದಗಿ ಬರುತ್ತದೆ. ಕತೆಗಾರ ಆಯಾ ಸಂದರ್ಭಕ್ಕೆ ತಕ್ಕಂತೆ ಮಾಡುವ ಸ್ತ್ರೀ-ಪುರುಷರ ಕುರಿತು ವ್ಯಾಖ್ಯೆಯನ್ನು ನಾವು ಒಪ್ಪದಿರಬಹುದು. ಆದರೆ ಕಾತ್ಯಾಯನಿಯ ಧೀರೋದಾತ್ತತೆಯನ್ನು ಒಪ್ಪದೇ ಒರಲಿಕ್ಕೆ ಸಾಧ್ಯವಿಲ್ಲ. 
'ಸ್ಮಾರಕ;  ಕಥೆಯಲ್ಲಿ ಬರುವ ತಾಯಿ ಮತ್ತು ಮಗಳು ಧ್ರುವಾಂತರಗಳಲ್ಲಿ ಇದ್ದಾರೆ. ವ್ಯವಕಾರಿಕ ಚಾಣಾಕ್ಷತೆಯ ಆಳದಲ್ಲಿ ಕಂಡೂಕಾಣದಂತೆ  ತೋರಿಸಿಕೊಳ್ಳುವ ಮಾತೃತ್ವದ ಸೆಲೆ ಅಚ್ಚರಿಹುಟ್ಟಿಸುವಂತಿಕೆ ಕಥೆಯಲ್ಲಿ ಅಭಿವ್ಯಕ್ತಿಪಡೆದಿದೆ. ರೊಮ್ಯಾಟಿಕ್ ಆಗದೆ ಭಾವದ ಆರ್ದ್ರತೆ ಡಾಕಿಸಿಕೂಳ್ಳುವ ಸೇತೂರಾಮರ ಕಥೆಗಳ ಈ ಸ್ವಭಾವ ಅಸಾಮಾನ್ಯವಾದುದಾಗಿದೆ.

'ಮೋಕ್ಷ' ಸಂಗ್ರಹದಲ್ಲಿ ನಾನು ಬಹುವಾಗಿ ಮೆಚ್ಚಿನ ಮತ್ತೊಂದು ಕಥೆ. ಇದು ಅಸಂಗತ ಎಂಬಂತೆ ಓದಿಸಿಕೊಳ್ಳುವ ಕಠೋರ ವಾಸ್ತವದ ಕಥೆ. ಮಠವೊಂದರ ಕಪ್ಪುಮುಖ, ಅರಿವಿದ್ದೂ ಇದ್ದೂ ಅದಕ್ಕೆ ಕಾವಲು ಕೂತಂತಿರುವ ಜಗದ್ಗುರುವಿನ ಮನೋತುಮುಲ, ಕೊನೆಗೆ ಕಪ್ಪುಕುಳಗಳನ್ನು ಕಚ್ಚಿ ಸೇಡುತೀರಿಸಿಕೊಳ್ಳಬೇಕೆಂಬ ಸ್ವಾಮಿಯ ಹಠ. ಪರಿಣಾಮವಾಗಿ ಆತ್ಮಹತ್ಯೆಯೊಂದಿಗೆ ಅವನು ಪಡೆಯುವ ಮುಕ್ತಿ. ಇದನ್ನು ರೆಝೋರ್ರಿನಷ್ಟು ಹರಿತವಾದ ಭಾಷೆಯಲ್ಲಿ ಕಥೆ ಬಿಚ್ಚಿಡುತ್ತಾ ಹೋಗುತ್ತದೆ. ಆಧ್ಯಾತ್ಮದ ನೆಲೆ ತಪ್ಪಿಹೋದಾಗಿ ಮೋಕ್ಷ ಎಂಬ ಮಾತು ಪಡೆಯುವ ವ್ಯಂಗ್ಯಾರ್ಥವು ಕಥೆಯಲ್ಲಿ ಸಹಜವಾಗಿ ಸ್ಪೋಟಗೊಂಡು, ಕೇಟ್ಗೆ ಬೇರೆ ಒಂದು ಆಯಾಮವನ್ನೇ ದೊರಕಿಸುತ್ತದೆ.

'ಸಂಭವಾಮಿ' ಮತ್ತು 'ನಾವಲ್ಲ' ಕಥೆಗಳು ಒಂದು ಸಮಾಜವು ತನ್ನ ಸನ್ನಡತೆಯನ್ನು ಪೂರ್ಣಪ್ರಮಾಣದಲ್ಲಿ ಕಳೆದುಕೊಂಡಾಗ ಸಂವೇದನೆ ಶೀಲಾನಾದ ಕತೆಗಾರನಲ್ಲಿ ಉಂಟಾಗುವ ಸಾತ್ವಿಕ ಆಕ್ರೋಷದ ನೆಲೆಯ ಅಭಿವ್ಯಕ್ತಿಯಾಗಿದೆ. ಅದು ಎಲ್ಲ ಕಡೆಯೂ ದೋಷವನ್ನೇ ಕಾಣುವ ಒಂದು ಅತಿಗೆ ಹೋಗಬಹುದು. ಈ ಮನ:ಸ್ಥಿತಿ ಕೊನೆಗೆ ಒಂದು ಬಗೆಯ ಸಿನಿಕತನಕ್ಕೂ ದಾರಿ ಮಾಡಿಕೊಡಬಹುದು. ಮಾನವತೆಯ ಹುಡುಕಾಟದಲ್ಲಿ ಲೇಖಕ ಹತಾಶಗೊಳ್ಳಬಾರದೆಂದು ನನಗೆ ಯಾವಾಗಲೂ ಅನ್ನಿಸುತ್ತದೆ. ಆ ಕಾರಣದಿಂದಲೇ 'ಕಾತ್ಯಾಯನಿ' ಮತ್ತು 'ಮೌನಿ' ಸಂಗ್ರಹದಲ್ಲಿ ನಾನು ಬಹುವಾಗಿ ಮೆಚ್ಚುವ ಕಥೆಗಳಾಗಿವೆ. ಕಳೆಯ ಅಮೃತತ್ವದಲ್ಲಿ ಲೇಖಕರ ಉದ್ವಿಗ್ನತೆ ತಣಿದಾಗ ಕಥೆನವು ದೀರ್ಘಬಾಳಿಕೆಯ ಚಿರಂಜೀವತ್ವ ಪಡೆಯುವುದೆಂಬುದರಲ್ಲಿ ನನಗೆ ಎಳ್ಳಷ್ಟೂ ಸಂದೇಹವಿಲ್ಲ ಸೇತೂರಾಮ್ ಅಂತಹ ಕಲಾದವ್ಯಕ್ಕೆ ಹಪಹಪಿಸುವ ಕ್ರಿಯಾಶೀಲ ವ್ಯಗ್ರತೆಯ ಕತೆಗಾರರರಾಗಿದ್ದಾರೆ. 


Sunday, May 1, 2016

ಹಲವು ಮಕ್ಕಳ ತಾಯಿ - ರಾಜಗೋಪಾಲ್ ಎಚ್ ವೈ

A Mother To Many -  Rajagopal H Y






ವಿಶ್ವವಾಣಿ ದಿನ ಪತ್ರಿಕೆಯಿಂದ (17-04-2016)

 

ಬೆಂಗಳೂರಿನ ಮಕ್ಕಳ ಕೂಟದ ಸಂಸ್ಥಾಪಕರಲ್ಲೊಬ್ಬರಾದ ಎಚ್ ವೈ ಸರಸ್ವತಿಯವರು ಹಿರಿಯ ಚಿಂತಕ ಎಚ್.ವೈ. ಶಾರದಾಪ್ರಸಾದರತಾಯಿ. ಬಹುಮುಖ ಪ್ರತಿಭೆಗಳ ಸಂಗಮವಾಗಿದ್ದ ಸರಸ್ವತಿ ಅವರ ಬಗ್ಗೆ ಅವರ ಇನ್ನೊಬ್ಬ ಪುತ್ರ ಎಚ್.ವೈ.ರಾಜಗೋಪಾಲ್  ಪುಸ್ತಕವೊಂದನ್ನು ಸಂಪಾದಿಸಿದ್ದಾರೆ. ಅಭಿನವ ಪ್ರಕಾಶನ ಪ್ರಕಟಿಸಿರುವ ‘ಹಲವು ಮಕ್ಕಳ ತಾಯಿ’ ಎಂಬ ಹೆಸರಿನ ಈ ಕೃತಿಯಲ್ಲಿರುವ ರಾಜಗೋಪಾಲರ ಲೇಖನದ ಆಯ್ದ ಭಾಗ ಇಲ್ಲಿದೆ.
 
ಹೊರಗಡೆ ಮನಸ್ಸನ್ನು ಸೂರೆಗೊಳ್ಳುವಂತೆ ಚೆಲ್ಲಿದ ಬೆಳದಿಂಗಳು. ಜೊತೆಗೆ ಎಲ್ಲಾ ಉಪಮೆಗಳನ್ನೂ  ಮೀರಿ  ನಿಂತ  ಪ್ರಶಾಂತತೆ.  ನಾನು  ಎಂದೂ  ಇಲ್ಲದಂತೆ ಅವತ್ತು ಸ್ವಲ್ಪ ಬೇಗನೆಯೇ ಮನೆ ತಲುಪಿದ್ದೆ. ಇತ್ತೀಚೆಗಂತೂ ಅರ್ಧದಷ್ಟು ಶಹರ ನಿದ್ದೆಗೆ ಜಾರಿದ  ಮೇಲಷ್ಟೇ  ಮನೆ  ಸೇರುವುದು  ನನಗೆ  ವಾಡಿಕೆಯಾಗಿಬಿಟ್ಟಿದೆ.  ಮನೆ  ತಲುಪಿದ ನಾನು,  ಹೊರಗಿನ  ಎಲ್ಲಾ  ಒತ್ತಡಗಳನ್ನೂ  ಮರೆತು  ಹಾಯಾಗಿ  ಮೇಜಿನ  ಎದುರಿನ ಕುರ್ಚಿಯಲ್ಲಿ  ಕುಳಿತುಕೊಂಡೆ.  ಒಂದೆರಡು  ವರ್ಷಗಳ  ಹಿಂದೆ  ಒಬ್ಬ  ಗಂಭೀರ ವಿದ್ಯಾರ್ಥಿಯಾಗಿ  ಅಭ್ಯಾಸದಲ್ಲಿ  ತೊಡಗಿಕೊಂಡು,  ಹೆಚ್ಚಿನ  ಪಾಂಡಿತ್ಯ  ಸಾಧನೆಗೆ ತವಕಿಸುತ್ತಿದ್ದ ನನ್ನ ಹಿಂದಿನ ದಿನಗಳನ್ನು ಮನಸ್ಸು ಮೆಲುಕು ಹಾಕುತ್ತಿತ್ತು...ತಾಯಿ ಬಂದು ನನ್ನ ಪಕ್ಕದಲ್ಲಿ ನಿಂತಳು.

ಇದು ಹಲವು ತಿಂಗಳುಗಳ ನಂತರ ನನಗೆ ಸಿಕ್ಕಿದ ಸೌಭಾಗ್ಯ ಮತ್ತು ಅವಳಿಗೆ ಸಿಕ್ಕಿದ ಅವಕಾಶ. ನನ್ನ ಸುತ್ತ ಹರಡಿದ ಮಾತೃತ್ವದ ಕಂಪನ್ನು ಆಸ್ವಾದಿಸುತ್ತಾ  ಅದರಲ್ಲೇ  ಮುಳುಗಿ  ಆನಂದವಾಗಿ  ಕನಸಿನಲ್ಲಿ  ವಿಹರಿಸಿದೆ.  ನಾನು ನಿನ್ನೆಯಷ್ಟೇ ಮಾಡಿದ್ದ ಭಾಷಣ, ಮನಸ್ಸಿನ ಒಳಗಿನ ಉದ್ವೇಗ, ಬಿಸಿ, ರಾಜಕೀಯ ಪರಿಸ್ಥಿತಿ, ಗಾಂಧಿಜೀಯ ಉಪವಾಸ - ಎಲ್ಲವೂ ತುಂಬಾ ತುಂಬಾ ದೂರ ಇದ್ದಂತೆ ಅನಿಸಿತು. ಪಾಪು, ರಾಜು, ಮೋಹನ, ಮಿಣಿ ಎಲ್ಲರೂ ಶನಿವಾರದ ಭಜನೆಯನ್ನು ರಾಗವಾಗಿ ಹಾಡುತ್ತಿದ್ದರು. ಬೀದಿಯಲ್ಲಿ  ಸೈಕಲ್  ಮೇಲೆ  ಯಾರೋ  ಹೋದಂತೆ  ಅನಿಸಿತು.  ಬೆಳದಿಂಗಳ ಛಾಯೆಯಲ್ಲಿ ಮುಖ ಕಾಣಿಸಲಿಲ್ಲ. ಆ ಮನುಷ್ಯನ ಕಣ್ಣುಗಳು ನನ್ನನ್ನೇ ಹುಡುಕುತ್ತಿರುವಂತೆ ಅನ್ನಿಸಿತು. ತಾಯಿಗೂ ಹಾಗೆಯೇ ಅನ್ನಿಸಿರಬೇಕು.
ಅವಳು  ಕೂಗಿ  ಹೇಳಿದಳು:  ‘ಅದು  ಶ್ರೀಕಂಠಶಾಸಿ  ಇರಬೇಕು.  ನಾನು ಬರುತ್ತಿರುವಾಗ ಆ ವ್ಯಾನ್ ಅವನ ಮನೆಯ ಹೊರಗೆ ನಿಂತಿದ್ದುದನ್ನು ನೋಡಿದ್ದೇನೆ’ ಹೌದು. ಅವನು ನಿನ್ನೆಯೂ ನನಗಾಗಿ ಹುಡುಕುತ್ತಿದ್ದ. ನನ್ನನ್ನು  ಬಂಧಿಸಬೇಕೆಂದಿದ್ದರೆ  ಅವನು  ನಿನ್ನೆ  ಬೆಳಿಗ್ಗೆಯೇ  ಯಾಕೆ ಬರಲಿಲ್ಲ? ಹೀಗಂದುಕೊಂಡ ನಾನು, ‘ನನ್ನನ್ನು ಬಂಧಿಸುವುದಕ್ಕಿಂತ ಯಾವುದೇ  ಸಾರ್ವಜನಿಕ  ಚಟುವಟಿಕೆಯಲ್ಲಿ  ಭಾಗವಹಿಸದಂತೆ ನಿರ್ಬಂಧನೆಯ  ಆದೇಶ  ನೀಡುವ  ಸಾಧ್ಯತೆಯೇ  ಹೆಚ್ಚು’  ಎಂದು ತಾಯಿಗೆ  ಹೇಳಿದೆ.  ಆದರೆ  ಅವಳು  ಅದನ್ನು  ನಂಬಲು  ಸಿದ್ಧವಿರಲಿಲ್ಲ. ಭವಿಷ್ಯದಲ್ಲಿ ಇನ್ನೇನು ಕಾದಿದೆಯೋ ಎಂದು ಭಾರವಾದ ಹೃದಯದಿಂದ ಅವಳು  ಅಡುಗೆಮನೆ  ಕಡೆ  ನಡೆದಳು.  ತುಂಬಾ  ಧೈರ್ಯಶಾಲಿ  ದೇಶಾಭಿಮಾನಿ ಒಂದೆಡೆಯಾದರೆ,  ಇನ್ನೊಂದೆಡೆ  ಚಡಪಡಿಸುವ  ಮಾತೃ  ಹೃದಯ.  ನನ್ನ ತಂದೆ-ತಾಯಿಯರ ಮಧುರ ಧ್ವನಿ ನನ್ನಲ್ಲಿ ಸಂಚಲನ ಉಂಟುಮಾಡುತ್ತದೆ.

ಅಂತಹ ನನ್ನ ತಂದೆ-ತಾಯಿಗೆ  ನಾನು  ಒಂದು  ಸಂತೋಷದ  ಕಾರಣ  ಆಗುವ  ಬದಲು  ಚಿಂತೆಗೆ ಕಾರಣವಾಗುತ್ತಿದ್ದೇನಲ್ಲ ಎಂದು ಬೇಸರಪಟ್ಟೆ...‘ಬಂದದ್ದು ಶ್ರೀಕಂಠ ಶಾಸಿಯೇ. ನನ್ನ ಮೇಜಿನ ಮೇಲಿದ್ದ ವಿದ್ಯುದ್ದೀಪದ ಬೆಳಕಿನಲ್ಲಿ ಅವನ  ಸೂಕ್ಷ್ಮ  ಕಣ್ಣುಗಳಿಗೆ  ನಾನು  ಕಂಡಿದ್ದೆ.  ನನ್ನ  ಕಿಟಕಿಯ  ಹತ್ತಿರ  ಬಂದ ಅವನು...‘ದಯವಿಟ್ಟು ನನ್ನನ್ನು ಕ್ಷಮಿಸು. ನನಗೆ ಇಷ್ಟವಿಲ್ಲದ ಈ ಕೆಲಸವನ್ನು ಮತ್ತೊಮ್ಮೆ ಮಾಡಬೇಕಾಗಿದೆ’ ಎಂದು...ಹೇಳಿದ. ತಾಯಿಗೆ ಮತ್ತು ಇತರರಿಗೆ ಈ ವಿಷಯ ತಿಳಿಸಿದೆ. ಹಠಾತ್ತಾಗಿ  ಕವಿದ  ಮೌನದಲ್ಲಿ  ಹಾಡಿನ  ಕೊನೆಯ  ಸ್ವರಗಳು  ಅನುರಣಿಸಿದವು.  ಅಸಹಜ ಮೌನ ಆವರಿಸಿತು...ತಾಯಿ ತುಂಬಾ ಅನ್ಯಮನಸ್ಕಳಾಗಿದ್ದಳು.

ಆದರೆ ಅವಳ ಕಣ್ಣುಗಳು ಛಲದ ಕಣ್ಣೀರಲ್ಲಿ ಹೊಳೆಯುತ್ತಿದ್ದವು. ಈ ಇಷ್ಟು ಸಂಕಟದ ನಡುವೆಯೂ ಅವಳಿಗೆ ನನ್ನ ಬಗ್ಗೆ ಹೆಮ್ಮೆ ಇದ್ದಿರಬೇಕು. ಅಷ್ಟೇ ನನಗೆ ಬೇಕಾಗಿರುವುದು ಕೂಡ. ತಂದೆ ಮಾತ್ರ ಸಾಕಷ್ಟು ವಿಚಲಿತರಾದಂತೆ ಕಂಡರು. ನನಗೂ ಶಂಕರಪ್ಪನಿಗೆ ಆದ ಹಾಗೆಯೇ ಆಗಬಹುದು ಎಂಬ ಭಯ  ಅವರಿಗೆ  ಇದ್ದಿರಬೇಕು...ಜೈಲಿನಲ್ಲಿ  ಯಾವುದೇ  ವಿಷಯವನ್ನು  ಅತಿರೇಕಕ್ಕೆ ತೆಗೆದುಕೊಂಡು ಹೋಗದಂತೆ ಮತ್ತೆ ಮತ್ತೆ ಅವರು ನನ್ನನ್ನು ಕೇಳಿಕೊಂಡರು...’ ಅಣ್ಣನನ್ನು ಪೊಲೀಸರು ಅದೇ ರಾತ್ರಿ ಬಂಧಿಸಿದರು. ಕೆಲವು ಕಾಲ ಮೈಸೂರು ಜೈಲಿನಲ್ಲಿ, ಆಮೇಲೆ ಬೆಂಗಳೂರು ಜೈಲಿನಲ್ಲಿದ್ದು ಒಟ್ಟು ಹತ್ತು ತಿಂಗಳ ಮೇಲೆ ಬಿಡುಗಡೆ ಹೊಂದಿದ.

ಅವನು  ಜೈಲಿನಲ್ಲಿದ್ದಾಗ  ಅಲ್ಲಿ  ನಡೆದ  ಸಂಗತಿಗಳು,  ಅಲ್ಲಿ  ತನಗಾದ  ಅನುಭವಗಳು, ತಂದೆ-ತಾಯಿಯರನ್ನು  ಅವನು  ನೆನಸಿಕೊಳ್ಳುತ್ತಿದ್ದುದು,  ಅವರು  ಕಷ್ಟಪಟ್ಟು  ಜೈಲಿನ ಬಾಗಿಲಿಗೆ  ಹೋಗಿ  ಜೈಲರನ  ಅನುಮತಿ  ಪಡೆದು  ಕೆಲವೇ  ನಿಮಿಷ  ಅವನನ್ನು ನೋಡಿಬರುತ್ತಿದ್ದುದು  -  ಇವೆಲ್ಲ  ನಮ್ಮ  ಮನೆಯ  ಚರಿತ್ರೆಯ  ಒಂದು  ವಿಶಿಷ್ಟ  ನೆನಪಿನ ಸಂಪುಟವಾಗಿವೆ. ತಂದೆ ತಾಯಿ ಆ ದಿನಗಳಲ್ಲಿ ತುಂಬಾ ಮಾನಸಿಕ ಕಷ್ಟಗಳನ್ನು ಹೊತ್ತರು.ಜೊತೆಗೆ ಆರ್ಥಿಕ ಕಷ್ಟವೂ ಇತ್ತೆಂದು ಅಣ್ಣ ಬರೆಯುತ್ತಾನೆ, ಅದು ಹುಡುಗರಾದ ನಮ್ಮ ಕಣ್ಣಿಗೆ ಗೋಚರವಾಗುತ್ತಿರಲಿಲ್ಲವಾದರೂ. ಆದರೆ ಎಂಥ ಪರೀಕ್ಷೆಯಲ್ಲೂ ಅಧಿರಳಾಗದೆ, ಕುಸಿಯದೆ ನಿಂತಳು ಅಮ್ಮ. ಅವಳಿಗೆ ಆಗ 36 ವಯಸ್ಸು, ನನ್ನ ಪುಟ್ಟ ತಂಗಿ ನೀರಜಾಳಿಗೆ ಎರಡು ವರ್ಷವಷ್ಟೆ.
ಜೈಲಿನಿಂದ ಬಿಡುಗಡೆಯಾದ ಮಾರನೆಯ ವರ್ಷ ಅಣ್ಣ ಮತ್ತೆ ಕಾಲೇಜು ಸೇರಿ ತನ್ನ ಎರಡನೆಯ  ವರ್ಷದ  ಇಂಗ್ಲಿಷ್  ಆನರ್ಸ್  ವಿದ್ಯಾಭ್ಯಾಸ  ಮುಂದುವರೆಸಿದ.  ಅದರ ಮುಂದಿನ ವರ್ಷ ಬಹಳ ಮುತುವರ್ಜಿಯಿಂದ ಓದಿ ಮೂರನೆಯ ವರ್ಷದ ಪರೀಕ್ಷೆಯಲ್ಲಿ ಪ್ರಥಮ  ದರ್ಜೆಯಲ್ಲಿ  ಪ್ರಥಮ  ಸ್ಥಾನದೊಂದಿಗೆ  ತೇರ್ಗಡೆಯಾದ.  ಪರೀಕ್ಷೆ  ಮುಗಿಸಿ -ಲಿತಾಂಶಕ್ಕೆ ಕಾಯುತ್ತಿದ್ದ ಸಮಯದಲ್ಲಿ ಅಣ್ಣ ನನ್ನ ಅಕ್ಕ ಕಸ್ತೂರಿಗೂ, ನನಗೂ ಆರ್. ಕೆ. ನಾರಾಯಣ್ ಬರೆದ    Swami and Friends     ಓದಿ ಹೇಳುತ್ತ, ಅದನ್ನು ಹಾಗೇ ಕನ್ನಡಕ್ಕೆ ಭಾಷಾಂತರ ಮಾಡಿ ‘ಸ್ವಾಮಿ ಮತ್ತು ಅವನ ಸ್ನೇಹಿತರು’ ಎಂಬ ಹೆಸರಿನಲ್ಲಿ ಪ್ರಕಟಿಸಿದ. ಆರ್.  ಕೆ.  ಲಕ್ಷ್ಮಣ್  ಚಿತ್ರಗಳಿಂದ  ಕೂಡಿದ  ಆ  ಪುಸ್ತಕ  ಪ್ರಕಟವಾದೊಡನೆ  ಅತ್ಯಂತ ಜನಪ್ರಿಯವಾಯಿತು. (ನಾರಾಯಣ್ ಆಗ ನಮ್ಮ ಪಕ್ಕದ ಮನೆಯಲ್ಲೇ ಇದ್ದರು.)-ಲಿತಾಂಶ  ತಿಳಿದ  ಮೇಲೆ  ಅಣ್ಣ  ಮದರಾಸಿನ   Indian  Express   ಪತ್ರಿಕೆಯಲ್ಲಿ ಉಪಸಂಪಾದಕನಾಗಿ  ಕೆಲಸಕ್ಕೆ  ಸೇರಿದ.

ಅಪ್ಪ  ಆ  ದಿನಗಳಲ್ಲಿ  ನಾಗಮಂಗಲದಲ್ಲಿ ಕೆಲಸದಲ್ಲಿದ್ದರು. ಅಣ್ಣ ಅವರನ್ನು ಹೋಗಿ ನೋಡಿ ಹಾಗೆಯೇ ಅಲ್ಲಿಂದ ಮುಂದಕ್ಕೆ ಮದರಾಸಿಗೆ ಹೋದ. ಒಂದು ಸಣ್ಣ ಹಾಸಿಗೆ ಸುರುಳಿ ಮಾತ್ರ ಹೊತ್ತು ಹೊರಟ ಅಣ್ಣ. ಅವನು ಅಪ್ಪನನ್ನು ನೋಡಿ ಮತ್ತೆ ಮೈಸೂರಿಗೆ ಬಂದು  ಆಮೇಲೆ  ಮದರಾಸಿಗೆ  ಹೋಗುತ್ತಾನೆ  ಎಂದು  ಎಣಿಸಿದ್ದೆ. ಹಾಗಾಗದೆ  ಅವನು  ನಾಗಮಂಗಲದಿಂದ  ಸೀದ  ಮದರಾಸಿಗೆ ಹೋದದ್ದು  ನನ್ನ  ಮನಸ್ಸಿಗೆ  ಕಷ್ಟವಾಯಿತು.  ಅಣ್ಣ  ನಮ್ಮೆಲ್ಲರಿಗೂ ಅಷ್ಟು ಮೆಚ್ಚಾಗಿದ್ದ. 1947ರಲ್ಲಿ  ದೇಶಕ್ಕೆ  ಸ್ವಾತಂತ್ರ್ಯ  ಬಂದಾಗ  ಮನೆಯಲ್ಲಿ  ಅಮ್ಮ ಸಂಭ್ರಮದಿಂದ  ಹಬ್ಬ  ಮಾಡಿದ್ದಳು.  ನಮಗೆಲ್ಲ  ಹೊಸ  ಬಟ್ಟೆ ಹೊಲಿಸಿದ್ದಳು.

ಮನೆಯನ್ನು  ಸ್ವಚ್ಛಗೊಳಿಸಿ  ತೋರಣ  ಕಟ್ಟಿ  ಮನೆಯ ಮೇಲೆ ಧ್ವಜ ಹಾರಿಸಿದ್ದೆವು. ಅಣ್ಣ ಆ ವೇಳೆಗೆ ಮದರಾಸಿನಿಂದ ವರ್ಗ ಹೊಂದಿ ಬೊಂಬಾಯಲ್ಲಿ National Standard  ಪತ್ರಿಕೆಯಲ್ಲಿ ವಾರ್ತಾ ಸಂಪಾದಕನಾಗಿದ್ದ. ಸ್ವಾತಂತ್ರ್ಯ  ಶುಭದಿನವನ್ನು  ಎದುರುಗೊಳ್ಳಲು  ‘ವಿಜಯೋತ್ಸಾಹದಿ  ನಲಿಯುವ  ಬನ್ನಿ’ ಎಂದು  ಅವನು  ಬರೆದು  ಕಳಿಸಿದ್ದ  ಗೀತೆಗೆ  ಅಪ್ಪ  ರಾಗ  ಸಂಯೋಜನೆ  ಮಾಡಿ  ಅದನ್ನು ನಮಗೆಲ್ಲ ಹೇಳಿಕೊಟ್ಟಿದ್ದರು. ಅದನ್ನು ಅದೇ ದಿನ ಮಧ್ಯಾಹ್ನ ಶಿವರಾಮಪೇಟೆಯಲ್ಲಿದ್ದ ರಾಜಕಮಲ್  ಥಿಯೇಟರಿನಲ್ಲಿ  ನಡೆದ  ಸಾರ್ವಜನಿಕ  ಸಭೆಯಲ್ಲಿ  ಹಾಡಿದ್ದೆವು.  ಮಕ್ಕಳ ಕೂಟದಲ್ಲಿ, ಮತ್ತಿತರ ಕಡೆ ನಡೆದ ಸ್ವಾತಂತ್ರೊ ತ್ಸವ ಸಮಾರಂಭಗಳಲ್ಲಿ ಅಮ್ಮನೂ ನಾವೂ ಭಾಗವಹಿಸಿದೆವು.ಆದರೆ ಆ ಸಂಭ್ರಮ ಮುಗಿಯುತ್ತಿದ್ದಂತೆ ಮೈಸೂರಲ್ಲಿ ಮತ್ತೆ ಚಳವಳಿ ಪ್ರಾರಂಭಿಸಿತು.

ಮೈಸೂರು  ದೇಶೀಯ  ಸಂಸ್ಥಾನವಾಗಿದ್ದು  ಅದು  ಭಾರತದಲ್ಲಿ  ವಿಲೀನವಾಗಲು  ಆ ಮೊದಲೇ ಒಪ್ಪಿಗೆ ಕೊಟ್ಟಿದ್ದರೂ ಅಲ್ಲಿ ಇನ್ನೂ ಜವಾಬ್ದಾರಿ ಸರ್ಕಾರ ( responsible government ) ಬಂದಿರಲಿಲ್ಲ. ಇನ್ನೂ ದಿವಾನರ ಸರಕಾರವೇ ನಡೆಯುತ್ತಿತ್ತು. ಸರ್ ಆರ್ಕಾಟ್ ರಾಮಸ್ವಾಮಿ  ಮೊದಲಿಯಾರರು  ಆಗ  ದಿವಾನರು.  ಅವರ  ವಿರುದ್ಧ  ಮೈಸೂರು ಸಂಸ್ಥಾನದಲ್ಲೆಲ್ಲ  ಪ್ರತಿಭಟನೆ  ಮೊದಲಾಯಿತು.  ‘ಆರ್ಕಾಟರೇ  ತೊಲಗಿ’  ‘ಆರ್ಕಾಟ್ ಬಾಯ್ಕಾಟ್’ ಎಂಬ ಘೋಷಣೆಗಳು ಊರಲ್ಲೆಲ್ಲ ಹಬ್ಬಿದ್ದವು. ನೂರಡಿ ರಸ್ತೆ ಮತ್ತು ಆಗಿನ ವೈಸ್‌ರಾಯ್  ರಸ್ತೆ  ಸೇರುವ  ಐದು  ದೀಪದ  ವೃತ್ತದಲ್ಲಿ  ಸೇರಿದ್ದ  ಜನರ  ಮೇಲೆ  ಅಂದಿನ ಮೈಸೂರು ಜಿಲ್ಲೆಯ ಡೆಪ್ಯುಟಿ ಕಮಿಷನರ್ ಜಿ. ಎನ್. ನಾಗರಾಜರಾಯರು ಗೋಲಿಬಾರು ಮಾಡಲು ಪೊಲೀಸರಿಗೆ ಆe ಇತ್ತರು.

ಅಂದಿನ ಗೋಲಿಬಾರಿನಲ್ಲಿ ರಾಮಸ್ವಾಮಿ ಎಂಬ ಹಾರ್ಡ್ವಿಕ್ ಹೈಸ್ಕೂಲು ವಿದ್ಯಾರ್ಥಿ ಸತ್ತ. (ಇತ್ತೀಚೆಗೆ ಓದಿದ ಒಂದು ಲೇಖನದ ಪ್ರಕಾರ ನಾಗರಾಜರಾಯರೇ ತಮ್ಮ ಪಿಸ್ತೂಲಿನಿಂದ ರಾಮಸ್ವಾಮಿಯ ಮೇಲೆ ಗುಂಡು ಹಾರಿಸಿದರು ಎಂದು ತಿಳಿಯುತ್ತದೆ. ಅಲ್ಲದೆ ರಾಮಸ್ವಾಮಿ ನಾನು ಹಾರ್ಡ್ವಿಕ್ ಹೈಸ್ಕೂಲಿನಲ್ಲಿ ಮಿಡಲ್ ಮೊದಲನೆಯ ಮತ್ತು ಎರಡನೆಯ ಇಯತ್ತೆ ಓದುತ್ತಿದ್ದಾಗ ನಮ್ಮ ಕ್ಲಾಸಿನಲ್ಲೇ ಇದ್ದ ಎಂಬ ಸಂಗತಿಯೂ  ತಿಳಿಯಿತು.)  ಅವನ  ನೆನಪಿನಲ್ಲೇ  ಅಂದಿನಿಂದ  ಆ  ವೃತ್ತಕ್ಕೆ  ರಾಮಸ್ವಾಮಿ ಸರ್ಕಲ್ ಎಂದು ಹೆಸರಾಗಿದೆ.


Saturday, April 30, 2016

ಬೆಂಗಳೂರು - ಜೋಗಿ ( ಗಿರೀಶ್ ರಾವ್ )

Bengaluru - Jogi ( Girish Rao )




ವಿಶ್ವವಾಣಿ ದಿನ ಪತ್ರಿಕೆಯಿಂದ (01-05-2016)

 

ಜೋಗಿಯವರ ಹೊಸ ಕಾದಂಬರಿಯ ಹೆಸರು ‘ಬೆಂಗಳೂರು’. ಬೆಂಗ ಳೂರೆಂಬ ಊರಿಗಿರುವ ಗುಣಗಳು ಈ ಕೃತಿಗೂ ಇವೆ. ‘ಗ್ರೀಷ್ಮ- ಹುಚ್ಚು ಬಿಸಿಲು, ಹುಚ್ಚು ಧಗೆ, ಹುಚ್ಚೆದ್ದಿದೆ ಕ್ರೌರ್ಯನ’ ಎಂಬ ಟ್ಯಾಗ್ಲೈನ್ ಕೃತಿಯ ಅಂತರಂಗ ವನ್ನು ತೆರೆಯುವ ಪ್ರವೇಶಿಕೆಯಂತಿದೆ. ಇಲ್ಲಿ ನಾಯಕರಿಲ್ಲ; ಪ್ರತಿನಾಯಕರಿದ್ದಾರೆ. ಸ್ವತಃ ಇದರ ಕರ್ಮ ಭೂಮಿಯೇ ಖಳ ನಾಯಕಿ. ಬೆಂಗಳೂರಿಗೆ ತಾಯಿಯ ವಾತ್ಸಲ್ಯವಿಲ್ಲ, ಅಕ್ಕನ ಮಮತೆ ಯಿಲ್ಲ. ಅದಕ್ಕಿರುವುದು ಸುಖದ ಭ್ರಮೆ ನೀಡುವ ವೇಶ್ಯೆಯ ಗುಣ ಮಾತ್ರ ಎಂದು ಪ್ರತಿಪಾದಿಸುವ ಈ ಕೃತಿಯನ್ನು ಓದಿದಾಗ, ದೆಹಲಿಯನ್ನು ‘ಭಾಗಮತಿ’ ಎಂಬ ಒಬ್ಬ ವೇಶ್ಯೆ ಯಂತೆ ಕಲ್ಪಿಸುವ ಖುಷ್ವಂತ್ ಸಿಂಗರ ಕಾದಂಬರಿಯ ನೆನಪಾಗುವುದು ಆಕಸ್ಮಿಕ ಆಗಿರಲಿಕ್ಕಿಲ್ಲ.


ಹುಟ್ಟಿ ಬೆಳೆದ ಊರು ಸಿದ್ದಕಟ್ಟೆ ಮತ್ತು ನೆಲೆಯೂರಿದ ಕರ್ಮಭೂಮಿ ಬೆಂಗಳೂರು ಗಳನ್ನು ಏಕಸೂತ್ರದಲ್ಲಿ ಹೆಣೆಯುವ ನರಸಿಂಹ ಭಿಡೆ ಎಂಬಾತನ ಕಥಾನಕದ ಮೂಲಕ, ಮನುಷ್ಯ ನನ್ನು ನಿರಂತರ ಕೆಡವಿಹಾಕುವ ಕ್ರೌರ್ಯಿದ ನೆಲೆಗಳನ್ನು ಶೋಧಿಸು ತ್ತಾರೆ ಜೋಗಿ. ಹುಟ್ಟಿಸಿದ ಅಪ್ಪ ಭಿಡೆ ಯಂತೆ ಹುಚ್ಚನಾಗ ಬಾರದು ಎಂದುಕೊಳ್ಳುವ ನರಸಿಂಹ, ಅಪ್ಪನನ್ನು ಮೀರುವ ಯತ್ನದಲ್ಲಿ ವಿಲಕ್ಷಣ ವ್ಯಕ್ತಿಯಾಗುತ್ತ ಹೋಗು ತ್ತಾನೆ. ಹುಚ್ಚನಾಗುವುದರಿಂದ ಸಮಾಜದಲ್ಲಿ ದೊರೆಯುವ ಮಾನ್ಯತೆ ಆತನನ್ನು ಅಪರಾಧ ವರದಿಗಾರಿಕೆಯ ಹಾದಿಯಲ್ಲಿ ಬಲು ದೂರ ಕೊಂಡೊಯ್ಯುತ್ತವೆ. ಪ್ರೀತಿಯನ್ನು ಸೃಷ್ಟಿಸ ಲಾಗದ, ಅದನ್ನು ಹಂಚಲಾಗದ ಪೊಳ್ಳು ವ್ಯಕ್ತಿತ್ವದ ನರಸಿಂಹ, ಅಪ್ಪ- ಅಮ್ಮ- ಅಕ್ಕ- ಹೆಂಡತಿ ಹೀಗೆ ಎಲ್ಲರ ಮೇಲೂ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾನೆ. ಬೆಂಗಳೂರನ್ನು ಅರ್ಥ ಮಾಡಿಕೊಂಡಿದ್ದೇನೆ ಎಂದು ಭಾವಿಸುತ್ತಾನೆ. ‘ಇಲ್ಲಿ ಬೇರು ಬಿಡುತ್ತೇನೆ ಅನ್ನುವುದು ಭ್ರಮೆ. ಬೆಂಗಳೂರು ನೆಲೆಯಲ್ಲ, ಪ್ಲಾಟ್-ಫಾರ್ಮು. ನೆಲವಲ್ಲ, ರಿಯಲ್ ಎಸ್ಟೇಟು. ಈ ಊರಿಗೆ ನೆನಪುಗಳನ್ನು ಸೃಷ್ಟಿಸುವ ಶಕ್ತಿಯೂ ಇಲ್ಲ. ಇದೊಂದು ಕರ್ಮಭೂಮಿ. ಇಲ್ಲಿಗೆ ಮಂದಿ ದುಡಿಯುವು ದಕ್ಕೆ ಬರುತ್ತಾರೆ. ಕೈದಿಗಳಂತೆ ದುಡಿಯುತ್ತಾರೆ.

ಮತ್ತೆ ತಮ್ಮೂರಿಗೆ ಮರಳಬೇಕು ಎಂದು ಹಂಬಲಿಸು ತ್ತಾರೆ. ಆದರೆ ಬೆಂಗಳೂರು ಅವರನ್ನು ಮರಳಲು ಬಿಡುವುದಿಲ್ಲ. ಅಭಿಮನ್ಯುವಿನ ಉತ್ಸಾಹ ಮತ್ತು ಹುಮ್ಮಸ್ಸಿನಿಂದ ಈ ಚಕ್ರ ವ್ಯೂಹದ ಒಳಹೊಕ್ಕ ವರು ಹೋರಾಡಿಯೇ ಮಡಿಯಬೇಕು’ ಎಂಬ ನರಸಿಂಹನ ಮಾತು ಗಳು, ಮುನ್ನುಡಿಯಲ್ಲಿ ಕೃತಿಕಾರ ಆಡುವ ಮಾತುಗಳನ್ನು ಹೋಲುತ್ತವೆ. ಈ ಕೃತಿಯಲ್ಲಿ ಬೆಂಗಳೂರಿನ ಲ್ಯಾಂಡ್ ಮಾರ್ಕ್ ಅನ್ನಿಸುವ ಒಂದೇ ಒಂದು ಸ್ಥಳ ಕಾಣಿಸಿಕೊಳ್ಳುವುದಿಲ್ಲ. ಅಂದರೆ, ಇದು ಬೆಂಗಳೂರು ಎಂಬ ಊರಿನ ಕುರಿತಾದ ದ್ದಲ್ಲ; ಬೆಂಗಳೂರು ಎಂಬ ಮನಸ್ಥಿತಿಯ ಕುರಿತಾದದ್ದು ಎಂದು ಭಾವಿಸಲು ಈ ಕೃತಿಯ ಒಳಗೆ ಕಾರಣಗಳು ಸಿಗುತ್ತವೆ.

ಕ್ರೌರ್ಯಿದ ವಿಜೃಂಭಣೆ ಕೊಂಚ ಹೆಚ್ಚಾಯಿತೇ, ಇದರಿಂದ ಓದುಗ ಕ್ರೌರ್ಯೆದ ಪರಿಣಾಮಕ್ಕೆ ಜಡವಾಗುವುದಿಲ್ಲವೆ, ಬೆಂಗಳೂರಿಗೆ ಅದೊಂದೇ ಮುಖ ಇರುವುದೇ ಎಂಬಿತ್ಯಾದಿ ಪ್ರಶ್ನೆಗಳನ್ನು ನಾವು ಕೇಳಬಹುದು. ಮುನ್ನುಡಿಯಲ್ಲಿ ನರಸಿಂಹನ ಪಾತ್ರಕ್ಕೆ ಸಮೀಪವಾದ ಮಾತುಗಳನ್ನು ಜೋಗಿ ಆಡಿರುವುದರಿಂದ, ಈ ಪ್ರಶ್ನೆಗಳನ್ನು ತಪ್ಪಿಸಿಕೊಳ್ಳಲು ಅವರಿಗೆ ಅವಕಾಶವಿಲ್ಲ. ಕೃತಿಗೆ ಅಂದದ ಮುಖಪುಟ ರಚಿಸಿದವರು ಬಂಗಾಲಿ ಮೂಲದ ಕಲಾವಿದೆ. ಬೆಂಗಳೂರಿನ ಜನಸಂಖ್ಯೆಯಲ್ಲಿ ಅತ್ಯಧಿಕ ಮಂದಿ, ಇಲ್ಲಿನ ಸಂಪತ್ತನ್ನು ಸೃಷ್ಟಿಸಿದವರು ಹೊರಗಿನವರು ಎಂಬುದಕ್ಕೂ ಇದಕ್ಕೂ ಸಂಬಂಧ ಇರಬಹುದೆ? ಕೃತಿಯನ್ನು ಅಂಕಿತ ಪ್ರಕಾಶನ ಪ್ರಕಟಿಸಿದೆ.



Friday, July 3, 2015

ಇಲ್ಲಿಯವರೆಗೆ ಇಷ್ಟು - ಜೋಗಿ ( ಗಿರೀಶ್ ರಾವ್ )

Illiyavarege Istu -Jogi ( Girish Rao )

ಪುಸ್ತಕದ ಮುನ್ನುಡಿಯಿಂದ:


ನೇಪಾಳದಲ್ಲಿ ಅಂಥ ದಟ್ಟ ಕಾಡುಗಳಿವೆ ಅನ್ನುವುದು ಗೊತ್ತಿರಲಿಲ್ಲ. ನಮ್ಮನ್ನು ಅಲ್ಲಿಗೆ ಕರೆದೊಯ್ದ ಪುಣ್ಯಾತ್ಮ ಚಿತ್ವನ್ ಎಂಬ ಅಭಯಾರಣ್ಯಕ್ಕೆ ಕರೆದೊಯ್ದಾ ಅಲ್ಲಿರುವ ಒಂದು ರೆಸಾರ್ಟಿನಲ್ಲಿ ಬಿಟ್ಟ ನಡುರಾತ್ರಿ ನಿದ್ದೆಬಾರದೇ ಹೊರಗೆ ಬಂದರೆ ಉದ್ದಕ್ಕೂ ಹಬ್ಬಿದ ಕಾಡು. ಬೆಳದಿಂಗಳು ಇಷ್ಟಿಷ್ಟೇ ಸೋರುತ್ತಿತ್ತು. ಆ ಕತ್ತಲಲ್ಲಿ ನಡೆಯುತ್ತಾ ಹೋದರೆ ಧುತ್ತನೆ ಎದುರಾದದ್ದು ಅಷ್ಟೆತ್ತರದ ಆನೆ. ಅದರ ಬುಡಕ್ಕೇ ಬಂದು ನಿಂತುಬಿಟ್ಟಿದೆ. ಆನೆ ಲೇಖಕನೆಂಬ ಕಾರಣಕ್ಕೋ ಏನೋ ಏನೂ ಮಾಡಲಿಲ್ಲ.

ಆ ರಾತ್ರಿ ಎದೆ ಝಲ್ಲೆಂದದ್ದು ಈಗಲೂ ಬೆಚ್ಚಿಬೀಳಿಸುತ್ತದೆ. ಹಾಗೆ ಭಯಗೊಂಡ ಎಷ್ಟೋ ವರುಷಗಳೇ ಆಗಿದ್ದವು. ನಮ್ಮೂರಲ್ಲಿ ತೆಂಗಿನ ಗರಿಯನ್ನು ಒಟ್ಟಾಗಿ ಕಟ್ಟಿ ಅದರ ತುದಿಗೆ ಬೆಂಕಿ ಹಚ್ಚಿ ಕೊಳ್ಳಿ ಮಾಡಿಕೊಂಡು ನಡುರಾತ್ರಿ ಹೊತ್ತಿಗೆ ಆರೆಂಟು ಮೈಲು ನಡೆದು ಮನೆ ಸೇರುತ್ತಿದ್ದೆ ದಿನಗಳಲ್ಲೂ ಅಷ್ಟೊಂದು ಭಯವಾಗಿರಲಿಲ್ಲ.

ಬದುಕು ಭಯಬೀಳಿಸುವುದನ್ನು ಬಿಟ್ಟೇ ಬಿಟ್ಟಿದ್ದೆ. ಎಲ್ಲವನ್ನೂ ತುಂಬ ನಿರ್ವಿಕಾರವಾಗಿ ನೋಡಲು ಆರಂಭಿಸಿದ್ದೇವೆ. ಒಂದು ಸಣ್ಣ ರೋಚಕತೆ ಬೇಕು ಅನ್ನಿಸಿದಾಗಲೂ ನಾವು ಮೊರೆಹೋಗುವುದು ವರ್ತಮಾನ ಪತ್ರಿಕೆ, ಟೀವಿ ಅಥವಾ ಸಿನಿಮಾಗಳಿಗೆ ಅದರಾಚೆಗೊಂದು ಲೋಕವಿದೆ ಮತ್ತು ಆ ಜಗತ್ತಿನೆಲ್ಲಿ ಬೆರಗುಗಳಿವೆ ಎಂದು ಕಾಣಿಸಿದರು ಹಲವರು. ಅವಧೂತರು, ಗುರುಗಳು, ಗೆಳೆಯ-ಗೆಳತಿಯರು, ಜ್ಯೋತಿ, ಖುಷಿ, ಅಮ್ಮ ಎಲ್ಲರೂ ಆ ಪಟ್ಟಿಯಲ್ಲಿದ್ದಾರೆ.

ಅವರಿಗೆ ಕೃತಜ್ಞತೆ.

 



Sunday, June 21, 2015

ನಿಮ್ಮಷ್ಟು ಸುಖಿ ಯಾರಿಲ್ಲ - ವಿಶ್ವೇಶ್ವರ ಭಟ್

Nimmashtu Sukhi Yarilla - Vishweshwara Bhat

 

ಸ್ವಾಮಿ ಅನಾಮಧೆಯಪೂರ್ಣ ಎಂಬ ಹೆಸರಿನಲ್ಲಿ ನಾನು 'ಬತ್ತದ ತೆನೆ' ಎಂಬ ಅಂಕಣ ಬರೆಯುತ್ತಿದ್ದೆ, ನಂತರ ಅದೇ ಹೆಸರಿನಲ್ಲಿ ಪುಸ್ತಕವನ್ನು ಸಹ ಪ್ರಕಟಿಸಿದೆ ಈ ಕೃತಿಗೆ ಸಿಕ್ಕ ಪ್ರತ್ರಿಕ್ರಿಯೆ ಅಭೂತಪೂರ್ವ. ಈಗಲೂ ಅನೇಕರು ಕೃತಿಗೆ ಓದು ನೀಡಿದ ಸ್ಪೂರ್ತಿ ಬಗ್ಗೆ ಬರೆಯುತ್ತಿರುತ್ತಾರೆ.

ಇತ್ತೀಚಿಗೆ 'ಬತ್ತದ ತೆನೆ'ಯನ್ನು ಓದಿದ ಯೋಗಿ ದುರ್ಲಭಜೀ  ಅವರು. 'ಇಂತ ಕೃತಿ ಬಹಳ ಉಪಯುಕ್ತ. ನೀವು ಇದರ ಮುಂದಿನ ಭಾಗವನ್ನು ಬರೆಯಬೇಕು. ಜನರಿಗೆ ಉಪದೇಶಗಳನ್ನು ಕೊಡದೇ, ಸಲಹೆ. ಟಿಪ್ಸ್ ಗಳನ್ನೂ ಕೊಡುತ್ತಾ ಬದುಕಿನ ಪ್ರಮುಖ ಸಂಗತಿಗಳನ್ನು ಹೇಳಬೇಕು. ಅದಕ್ಕೂ ಮೊದಲು ಈ ಟಿಪ್ಸ್ ಗಳನ್ನು ನಿಮ್ಮ ಮೇಲೆ ಪ್ರಯೋಗಿಸಿಕೊಳ್ಳಬೇಕು. ಆಗ ಕೃತಿ ಶುಲ್ಕವಾಗುವುದಿಲ್ಲ. ಬೋಧೆಯಾಗುವುದಿಲ್ಲ. ಈಗ ಜನರಿಗೆ ಬೇಕಾಗಿರುವುದೇ ಇದು' ಎಂದರು.

ಅವರ ಮಾತುಗಳನ್ನು ಕೇಳಿದ ಬಳಿಕ ೩೦-೪೦ ಅಧ್ಯಾಯಗಳ ಶೀರ್ಷಿಕೆಗಳನ್ನು ಬರೆದಿಟ್ಟುಕೊಂಡೆ. ದುರ್ಲಭಜೀಯವರು  ಹೇಳಿದಂತೆ. ಈ ಪೈಕಿ ನಾನು ಎಷ್ಟು ಟಿಪ್ಸ್ ಗಳನ್ನು ಅಳವಡಿಸಿ ಕೊಂಡಿದ್ದೇನೆ ಎಂದು ನನ್ನನ್ನೇ ಕೇಳಿಕೊಂಡೆ. ಪೈಕಿ ನಾನು ಆಚರಿಸುತ್ತಿರುವ, ಪಾಲಿಸುತ್ತಿರುವ ಟಿಪ್ಸ್ ಗಳನ್ನಷ್ಟೇ ಆಯ್ಕೆ ಮಾಡಿಕೊಂಡು ಅವುಗಳ ಬಗ್ಗೆ ಹೆಚ್ಚು ಕೊರೆಯದೇ, ಸಂಕ್ಷಿಪ್ತವಾಗಿ ಬರೆಯಲಾರಂಭಿಸಿದೆ.

ಅವರ ಪರಿಣಾಮಣವೇ ಈ ಕೃತಿ!

ಬಹಳ ಸಂದರ್ಭಗಳಲ್ಲಿ ನಾವು ಸುಲಭವಾದ. ಸರಳವಾದ ಸಂಗತಿಗಳನ್ನು ಕ್ಲಿಷ್ಟಮಾಡಿಕೊಂಡು ಪೇಚಾಡುತ್ತೇವೆ. ನಾವು ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುವುದೊಂದೇ ಅಲ್ಲ. ಆಹ್ವಾನವನ್ನೂ ಮಾಡುತ್ತೇವೆ. ಸಣ್ಣ ಸಂಗತಿಗಳೇ ನಮಗೆ ಬೃಹದಾಕಾರವಾಗಿ ಕಾಡುತ್ತವೆ.

ಅಷ್ಟಕ್ಕೂ ಜೀವನ ಅಂದ್ರೆ ಇದೇನಾ? ಇಷ್ಟೇನಾ? ನಮ್ಮ ಬದುಕನ್ನು ಸುಂದರವಾಗಿ ಕಳೆಯಲು ನೂರಾರು ಮಾರ್ಗಗಳಿವೆ. ಮಾರ್ಗಗಳು ಅಷೆಲ್ಲಾ ಇರಲಿ ಬಿಡಿ. ಆದರೆ ಆ ಸೌಂದರ್ಯವನ್ನು ಬೇರೆಲ್ಲೂ ಅರಸಬೇಕಾಗಿಲ್ಲ. ಅದನ್ನು ಹುಡುಕುವ ಮಾರ್ಗವಿದ್ದರೆ ಒಂದೇ. ನಮ್ಮ ಸುಖವನ್ನು ಸೃಷ್ಟಿಸಿಕೊಳ್ಳಬೆಕಾದವರು ನಾವೇ. ಅದು ನಮ್ಮೊಳಗೇ ಇದೆ. ಅದೇ ನಮಗೆ ಗೊತ್ತಿಲ್ಲ ಅದಕ್ಕಾಗಿ ಎಲ್ಲೆಲ್ಲೋ ಹುಡುಕುತ್ತೇವೆ. ಯಾರನ್ನೋ ಹುಡುಕಿಕೊಂಡು ಹೊಗುತ್ತೇವೆ. ನಮ್ಮನ್ನು ನಾವು ಪದೇಪದೆ ಭೇಟಿ ಮಾಡಿದರೆ, ನಮ್ಮೊಡನೆ ಕುಳಿತು ವಿಚಾರ ವಿನಿಮಯ ಮಾಡಿಕೊಂಡರೆ ಎಲ್ಲವೂ ಸಲೀಸು. ಅದಕ್ಕಾಗಿ ನಾವು ನಮಗೆ ಸಿಗಬೇಕು. ಆಗಲೇ ನಮ್ಮ ಸುಖ ಎಲ್ಲಿದೆಯೆಂಬುದು ತಿಳಿದೀತು.

ಈ ಪುಸ್ತಕ ಓದಿದೆ ಬಳಿಕ ನಿಮ್ಮಲ್ಲಿರುವ ಸುಖ, ಸಂತಸ, ನೆಮ್ಮದಿ ನಿಮಗೆ ಸಿಗಲಿ. ಸಿಗುತ್ತದೆಂದು ಆಶಯ ನನ್ನದು. ಯೋಗಿ ದುರ್ಲಭಾಜೀ ಅವರು ಹೇಳುವುದೇನೆಂದರೆ, 'ನಮಗೆ ಬೇಕಿರುವುದು ಜೀವನದ ಕುರಿತಾದ ಸಿದ್ದಾಂತಗಳಲ್ಲ. ಸರಳವಾದ ಜೀವನ ಸೂತ್ರಗಳು. ಒಂದು ಎಳೆ ಸಿಕ್ಕರೆ ದಾರ, ದಾರದಿಂದ ಹಗ್ಗ ಮಾಡಿಕೊಳ್ಳುವ ಜಾಣ್ಮೆಯನ್ನು ಜೀವನವೇ ಕಲಿಸಿಕೊಡುತ್ತದೆ.'

ನನ್ನ ಪ್ರಕಾರ, ಈ ಕೃತಿ ಕೂಡ ಅಂಥ ಒಂದು ಸಣ್ಣ ಎಳೆ. ಅದನ್ನು ನೀವು ದಾರವನ್ನಾದರೊ ಮಾಡಿಕೊಳ್ಳಿ, ಹಗ್ಗವನ್ನಾದರೂ ಮಾಡಿಕೊಳ್ಳಿ ಒಟ್ಟಾರೆ ಏನಾದರು ಮಾಡಿಕೊಳ್ಳಿ ಅದು ನಿಮ್ಮ ಬದುಕನ್ನು ಹಸನುಗೊಳಿಸುವ ಚೆಂದದ 'ಸೂತ್ರ'ವಾಗಲಿ.